ಚೂಡೆ ಮೀನು

ಕ್ಲೂಪಿಯಿಫಾರ್ಮಿಸ್ó ಗಣದ ಕ್ಲೂಪಿಯಿಡೀ ಕುಟುಂಬಕ್ಕೆ ಸೇರಿದ ಒಂದು ಸಾಗರವಾಸಿ ಆಹಾರ ಮೀನು. ಸಾರ್ಡಿನ್ ಮತ್ತು ಹೆರ್ರಿಂಗ್‍ಮೀನುಗಳ ಹತ್ತಿರ ಸಂಬಂಧಿ. ಇದರ ಶಾಸ್ತ್ರೀಯ ಹೆಸರು ಸ್ಪ್ರಾಟೆಲಾಯ್ಡಿಸ್ ಅಥವಾ ಕ್ಲೂಸಿಯ. ಭಾರತದ ಪಶ್ಚಿಮ ತೀರ ಸಮುದ್ರದಲ್ಲಿ ಹೇರಳವಾಗಿ ಸಿಗುತ್ತದೆ. ತಮಿಳುನಾಡಿನ ಮಂಡಪಮ್ ಬಳಿಯ ಸಮುದ್ರದಲ್ಲೂ ವಿಪುಲವಾಗಿದೆ. ಚಿಕ್ಕಗಾತ್ರದ ಮೀನು.  ಪೂರ್ತಿ ಬೆಳೆದಾಗ ಇದರ ಉದ್ದ ಸುಮಾರು 9.5 ಸೆಂ,ಮೀ. ದೇಹದ ಬಣ್ಣ ಹಳದಿಮಿಶ್ರಿತ ಬಿಳಿ. ದೇಹದ ಎರಡು ಪಕ್ಕಗಳಲ್ಲಿಯೂ ಬೆಳ್ಳಿಗೆರೆಯಂತೆ ಹೊಳೆಯುವ ಪಾಶ್ರ್ವರೇಖೆಗಳಿವೆ. ಮೂತಿ, ನೆತ್ತಿ, ಬೆನ್ನು, ಬಾಲ ಹಾಗೂ ಗುದದ ಬಳಿಯ ಪ್ರದೇಶಗಳು ಕೊಂಚ ಕಪ್ಪಗಿವೆ. ನೀರಿನಲ್ಲಿ ವಾಸಿಸುವ ಸಣ್ಣಪುಟ್ಟ ತೇಲುಸಸ್ಯಗಳು, ಸಂಧಿಪದಿಗಳು ಈ ಮೀನಿನ ಆಹಾರ. ಇದರ ಸಂತಾನೋತ್ಪತ್ತಿಯ ಕಾಲ ಏಪ್ರಿಲ್-ಮೇ. ಒಂದು ಹೆಣ್ಣು ಒಂದು ಪ್ರಾಯದಲ್ಲಿ ಸುಮಾರು 3 ಲಕ್ಷ ಮೊಟ್ಟೆಗಳನ್ನಿಡುತ್ತದೆಯೆಂದು ಅಂದಾಜು ಮಾಡಲಾಗಿದೆ. ಮೊಟ್ಟೆಗಳು 3 ದಿವಸಗಳಲ್ಲಿ ಒಡೆಯುತ್ತವೆ. ಆಗಸ್ಟ್‍ನಿಂದ ನವೆಂಬರ್ ತಿಂಗಳ ನಡುವಣ ಕಾಲದಲ್ಲಿ ಇವು ಅಪಾರಸಂಖ್ಯೆಯಲ್ಲಿ ಕರಾವಳಿಯಿಂದ 8-10 ಕಿ.ಮೀ. ದೂರದವರೆಗಿನ ಸಮುದ್ರದಲ್ಲಿ ಕಂಡಬರುತ್ತದೆ. ಇವನ್ನು ಹಿಡಿಯಲು ಈ ಕಾಲವೇ ಅತ್ಯಂತ ಉತ್ತಮ. ಹಲವಾರು ದೋಣಿಗಳಿಗೆ ಒಟ್ಟಿಗೆ ಕಟ್ಟಿ ಒಡ್ಡುವ ಕಿವಿರುಬಲೆಗಳನ್ನೊ (ಗಿಲ್ ನೆಟ್ಸ್) ಇಲ್ಲವೆ ಎರಡು ದೋಣಿಗಳ ಹಿಂಬದಿಗೆ ಕಟ್ಟಿ ಒಡ್ಡುವ ಸಂಚಿ ಬಲೆಗಳನ್ನೂ (ಬೋಟ್ ಸೇನ್) ಉಪಯೋಗಿಸಿ ಇವನ್ನು ಹಿಡಿಯಲಾಗುತ್ತದೆ. ಒಳ್ಳೆಯ ಆಹಾರಮೀನುಗಳೆಂದು ಹೆಸರಾಗಿರುವ ಇವನ್ನು ಒಣಗಿಸಿ ಉಪ್ಪಿನೊಂದಿಗೆ ಸೇರಿಸಿ ಪರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇದರಿಂದಾಗಿ ಇವು ಭಾರತದ ಮೀನುಗಾರಿಕೆ ಉದ್ಯಮದಲ್ಲಿ ಸಾಕಷ್ಟು ಪ್ರಸಿದ್ಧವಾಗಿವೆ.
(ಸಿ.ಜಿ.ಕೆ.; ಎಂ.ಎನ್.ಎಚ್‍ಇ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ